ಕೋಲುಕಳ್ಳಿ

ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಯೂಫೋರ್ಬಿಯ ತಿರುಕಳ್ಳಿ ಎಂಬುದು ಇದರ ವೈಜಾÐನಿಕ ನಾಮ. ಆಫ್ರಿಕದ ಮೂಲವಾಸಿಯಾದ ಇದು ಭಾರತದಲ್ಲೂ ಬಲು ಸಾಮಾನ್ಯ; ಬಂಜರು ಭೂಮಿಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಬೇಲಿಗಿಡವಾಗಿ ಬೆಳೆಸುವುದೂ ಉಂಟು. ಇದೊಂದು ಚಿಕ್ಕ ಪೊದೆ ಸಸ್ಯ. ಕಾಂಡ ದಂಡಾಕಾರವಾಗಿದೆ. ರೆಂಬೆಗಳು ನುಣುಪಾಗಿವೆ. ಮುಖ್ಯಕಾಂಡದ ಮೇಲೆ ರೆಂಬೆಗಳು ಸುತ್ತುಮಾದರಿಯಲ್ಲಿ ಜೋಡಣೆಯಾಗಿವೆ. ಎಲೆಗಳು ಹುಟ್ಟಿದರೂ ಅವು ಬಲುಬೇಗ ಉದುರಿಹೋಗುತ್ತವೆಯಾದ್ದರಿಂದ ಕಾಂಡವೇ ದ್ಯುತಿಸಂಶ್ಲೇಷಣ ಕಾರ್ಯವನ್ನು ನಿರ್ವಹಿಸುತ್ತದೆ. ಈ ಕಾರ್ಯದ ಅನುಕೂಲತೆಗೆಂದು ಕಾಂಡದಲ್ಲಿ ಕ್ಲೋರೊಫಿಲ್ ಇದೆ. ಕೋಲುಕಳ್ಳಿಯ ಇನ್ನೊಂದು ವಿಶೇಷ ಲಕ್ಷಣ ಇದರ ಕಾಂಡದಲ್ಲಿ ಬಿಳಿಯ ಬಣ್ಣದ ಹಾಲ್ನೊರೆಯಿರುವುದು. (ಈ ಲಕ್ಷಣದಲ್ಲಿ ಕೋಲುಕಳ್ಳಿ ಯೂಫೋರ್ಬಿಯೇಸೀ ಕುಟುಂಬದ ಇತರ ಸಸ್ಯಜಾತಿಗಳನ್ನು ಹೋಲುತ್ತದೆ.)

ಹಾಲ್ನೊರೆಯನ್ನು ಗಾಯಗಳಿಗೂ ಸಂಧಿವಾತಕ್ಕೂ ಹಲ್ಲುನೋವಿಗೂ ಔಷಧಿಯಾಗಿ ಬಳಸುತ್ತಾರೆ. ಕಿವಿನೋವಿಗೂ ಉಪಯೋಗಿಸುವುದುಂಟು. ಮೀನು ಮತ್ತು ಇಲಿಗಳಿಗೆ ಇದು ವಿಷವೆಂದು ಹೇಳಲಾಗಿದೆ. ಕೋಲುಕಳ್ಳಿ ಗಿಡದ ಇದ್ದಲನ್ನು ಬಂದೂಕಿನ ಸಿಡಿಮದ್ದಿನ ಜೊತೆಗೆ ಉಪಯೋಗಿಸುತ್ತಾರೆ. 			  				(ಎಂ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ